ರಣಜಿತ್ ಸಿಂಗ್
1872-1933. ಪ್ರಸಿದ್ಧ ಕ್ರಿಕೆಟ್ ಆಟಗಾರ. ಕ್ರಿಕೆಟ್ ರಂಗದ ಪವಾಡ ಪುರುಷನೆಂದೇ ಖ್ಯಾತನಾದ ಈತ 1872 ಸೆಪ್ಟೆಂಬರ್ 10ರಂದು ಜಾಮ್‍ನಗರದ ಬಳಿಯ ಸಾರೂದಾರ್ ಎಂಬ ಹಳ್ಳಿಯಲ್ಲಿ ಜನಿಸಿದ. ಇವನಿಗೆ ಅತ್ಯುತ್ತಮ ಶಿಕ್ಷಣ ದೊರೆಯುವಂತೆ ನವನಗರದ ದೊರೆ ಎಲ್ಲ ಏರ್ಪಾಟುಗಳನ್ನೂ ಮಾಡಿದ. ರಾಜಕುಮಾರರಿಗಾಗಿಯೇ ಇರುವ ಸೌರಾಷ್ಟ್ರದ ಕಾಲೇಜಿನಲ್ಲಿ ಕೆಲವು ಕಾಲ ಓದಿದ ಈತ ಅಲ್ಲಿಯೇ ಕ್ರಿಕೆಟ್ ಆಟದ ಬಗ್ಗೆ ಪ್ರಾಥಮಿಕ ತಿಳಿವಳಿಕೆಯನ್ನು ಪಡೆದ. 1888ರಲ್ಲಿ ಉನ್ನತ ಶಿಕ್ಷಣ ಪಡೆಯಲೆಂದು ಇಂಗ್ಲೆಂಡಿಗೆ ಹೋದ. 1889ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಖಾಸಗಿ ವಿದ್ಯಾರ್ಥಿಯಾಗಿ ಸೇರಿದ.

	1893 ರಿಂದ ಟ್ರಿನಿಟಿ ಕಾಲೇಜು ತಂಡದಲ್ಲಿ ಕ್ರಿಕೆಟ್ ಆಡತೊಡಗಿದ. 1895ರಲ್ಲಿ ಪ್ರಸಿದ್ಧ ಸಸೆಕ್ಸ್ ಕೌಂಟಿ ತಂಡವನ್ನು ಸೇರಿದ. ಈ ತಂಡದ ಪರವಾಗಿ ಆಡಿದ ಮೊದಲ ಪಂದ್ಯದಲ್ಲೇ ಅಜೇಯ 77 ರನ್ ಮತ್ತು 150 ರನ್ ಗಳಿಸಿ ಎಲ್ಲರ ಗಮನ ಸೆಳೆದ. ಇಲ್ಲಿಂದ ಇವನ ಕ್ರಿಕೆಟ್ ಜೀವನ ಆರಂಭವಾಯಿತು. 1896ರಲ್ಲಿ 2.789 ರನ್ ಗಳಿಸಿ ಡಬ್ಲ್ಯೂ.ಸಿ. ಗ್ರೇಸರನ ದಾಖಲೆ ಮುರಿದ. ಪ್ರಥಮ ದರ್ಜೆ ಪಂದ್ಯಗಳಿಂದ ಮೇಲೇರಿದ. ಈತ ಇಂಗ್ಲೆಂಡಿನ ರಾಷ್ಟ್ರೀಯ ತಂಡದಲ್ಲಿ ಆಡಲಾರಂಭಿಸಿದ. 1896ರಲ್ಲಿ ಓವೆಲ್ ಮೈದಾನದಲ್ಲಿ ಇಂಗ್ಲೆಂಡ್ ಪರವಾಗಿ ಆಸ್ಟ್ರೇಲಿಯ ತಂಡದ ವಿರುದ್ಧ ಆಡಿದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಅಜೇಯ 154ರನ್ ಗಳಿಸಿದ. ಅರ್ನೆಸ್ಟ್ ಜೋನ್ಸ್‍ರಂಥವರ ಪ್ರಚಂಡ ವೇಗದ ಬೌಲಿಂಗ್ ಎದುರಿಸಿ ಅಡಿ 1897-98ರಲ್ಲಿ ಆಸ್ಟ್ರೇಲಿಯದಲ್ಲಿ ಆ ತಂಡದ ವಿರುದ್ಧ ಬಾರಿಸಿದ 175 ರನ್ ಕ್ರಿಕೆಟ್ ಇತಿಹಾಸದಲ್ಲಿ ಇಂದಿಗೂ ಸ್ಮರಣೀಯವಾಗಿ ಉಳಿದಿದೆ. 1899 ಮತ್ತು 1900ರ 20ನೆಯ ಕ್ರೀಡಾಋತುವಿನಲ್ಲಿ 3000ಕ್ಕೂ ಹೆಚ್ಚು ರನ್ ಗಳಿಸಿ ರಣಜಿತ್‍ಸಿಂಗ್ ದಾಖಲೆ ಮಾಡಿದ್ದ. 1899-1903ರ ವರೆಗೆ ಈತ ಸಸೆಕ್ಸ್ ತಂಡದ ಕ್ಯಾಪ್ಟನ್ ಆಗಿದ್ದ. ಲೀಲಾಜಾಲವಾಗಿ ಕ್ರಿಕೆಟ್ ಆಡುವುದು ಇವನ ವೈಶಿಷ್ಟ್ಯವಾಗಿತ್ತು. ಇವನ ಆಕರ್ಷಕ ಬ್ಯಾಟಿಂಗ್ ನೋಡಿದವರು ಕ್ರಿಕೆಟ್ ಎಷ್ಟು ಸುಲಭ ಎಂದು ಉದ್ಗಾರ ತೆಗೆದದ್ದೂ ಉಂಟು. ಕ್ರಿಕೆಟ್ ಆಟದಲ್ಲಿ ಈತ ಕೆಲವು ವೈಶಿಷ್ಟ್ಯಪೂರ್ಣ ಹೊಡೆತಗಳನ್ನು ತೋರಿಸಿಕೊಟ್ಟು ತನ್ನದೆ ಶೈಲಿಯನ್ನು ರೂಪಿಸಿದ್ದು. ಇವುಗಳಲ್ಲಿ ಮುಖ್ಯವಾದುದು ಲೆಗ್ ಗ್ಲಾನ್ಸ್-ಬೌನ್ಸ್ ಆಗಿ ತಲೆ ಎತ್ತರಕ್ಕೆ ಬಂದ ಚೆಂಡಿಗೆ ಬ್ಯಾಟನ್ನು ಬೀಸದೆ ನೇರವಾಗಿ ಒಡ್ಡಿ ಎಡಕ್ಕೆ ತಿರುಗಿಸಿ ಬೌಂಡರಿಯತ್ತ ಅಟ್ಟುವುದು. ರಣಜಿತ್ ತನ್ನ ಕ್ರಿಕೆಟ್ ಜೀವನದಲ್ಲಿ ಯಾರನ್ನೂ ಅನುಕರಿಸಲಿಲ್ಲ. ಮುಂದೆ ಬಂದ ಯಾರೂ ಇವನನ್ನು ಪೂರ್ಣವಾಗಿ ಅನುಕರಿಸಲು ಸಾಧ್ಯವಾಗಲಿಲ್ಲ ಅಂಥ ವೈಶಿಷ್ಟ್ಯ ಇವನ ಆಟದಲ್ಲಿತ್ತು. ಇವನ ಆಟದ ಬಗ್ಗೆ ಇಂಗ್ಲೆಂಡಿನ ಪ್ರಸಿದ್ಧ ಆಟಗಾರ ರೋಡ್ಸ್ ಹೇಳಿದ ಮಾತುಗಳಿವು-''ನೀವು ರಣಜಿಯ ಆಟ ನೋಡಬೇಕು. ಬೌಲರ್ ಎಸೆದ ಚೆಂಡಿನ ಮೇಲಿನ ಹೊಲಿಗೆಗಳನ್ನು ಅವರು ನೋಡಬಲ್ಲರು ಕ್ರಿಕೆಟ್ ಆಟದಲ್ಲಿ ಇಂಥ ಏಕಾಗ್ರತೆಯನ್ನು ರಣಜಿತ್ ಗಳಿಸಿಕೊಂಡಿದ್ದ.

	1906ರಲ್ಲಿ ಭಾರತಕ್ಕೆ ಮರಳಿದ ಈತ ಹೊಸಜೀವನ ಆರಂಭಿಸಿದ. ಕ್ರಿಕೆಟ್ ರಂಗದಲ್ಲಿ ಮಾತ್ರವಲ್ಲದೆ ಸಾಮಾಜಿಕ ರಾಜಕೀಯ ರಂಗಗಳಲ್ಲಿಯೂ ಕೆಲಸ ಮಾಡಿದ. ನವನಗರದ ಮಹಾರಾಜನಾಗಿ ಜನೋಪಯೋಗಿ ಕಾರ್ಯಗಳಲ್ಲಿ ಯೋಜನೆಗಳು, ಶಾಲೆ, ಆರೋಗ್ಯ, ರೈಲು, ರಸ್ತೆ ಅಭಿವೃದ್ಧಿ ಹೀಗೆ ಹಲವು ಹತ್ತು ಸಾರ್ವಜನಿಕ ಕೆಲಸಗಳನ್ನು ಮಾಡಿ ತಾನೊಬ್ಬ ಉತ್ತಮ ಆಡಳಿತಗಾರನೂ ಹೌದೆಂದು ತೋರಿಸಿದ. 1920ರಲ್ಲಿ ಲೀಗ್ ಆಫ್ ನೇಷನ್ಸ್‍ನಲ್ಲಿ ಭಾರತೀಯ ರಾಜ್ಯಗಳನ್ನು ಪ್ರತಿನಿಧಿಸಿದ್ದ. 1930ರಲ್ಲಿ ಒಂದನೆಯ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ್ದ.

	1933ರ ಏಪ್ರಿಲ್ 2ರಂದು ಜಾಮ್‍ನಗರದಲ್ಲಿ ರಣಜಿತ್ ನಿಧನನಾದಾಗ ಇವನಿಗೆ 61 ವರ್ಷ ವಯಸ್ಸಾಗಿತ್ತು. ಕ್ರಿಕೆಟ್ ಮತ್ತು ಸಾರ್ವಜನಿಕರಂಗದಲ್ಲಿ ಸಲ್ಲಿಸಿದ ಈತನ ಸೇವೆಯ ನೆನಪಿಗಾಗಿ 1972ರ ಸೆಪ್ಟೆಂಬರ್‍ನಲ್ಲಿ ಜಾಮ್‍ನಗರದಲ್ಲಿ ರಣಜಿ ಶತಮಾನೋತ್ಸವವನ್ನು ಆಚರಿಸಲಾಯಿತು. ಈತನ ನೆನಪಿನಲ್ಲಿ 1934ರಿಂದ ರಣಜಿಟ್ರೋಫಿ ಕ್ರಿಕೆಟ್ ಚಾಂಪಿಯನ್‍ಷಿಪ್ ಪಂದ್ಯವನ್ನು ಪ್ರತಿವರ್ಷ ನಡೆಸಿಕೊಂಡು ಬರಲಾಗುತ್ತಿದೆ.							
(ಎಸ್.ಆರ್.ಐ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ